ಯುಪಿಎಸ್ಸಿ 2025 ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಯಾದಗಿರಿ ಜಿಲ್ಲೆಯ ನಾಲ್ವರು ಅಭ್ಯರ್ಥಿಗಳು ಸಾಧನೆ ಮಾಡಿದ್ದು, ಸಂದೀಪ್ ಬಾಡದ್ 82ನೇ ಶ್ರೇಣಿ, ಡಾ. ನಿವೇದಿತಾ ಭಾವಿಮನಿ 469ನೇ ಸ್ಥಾನ ಪಡೆದಿದ್ದಾರೆ.
ಯಾದಗಿರಿ: ದೇಶದ ಅತ್ಯಂತ ಕಠಿಣ ಮತ್ತು ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೊಂದು ಎಂದು ಪರಿಗಣಿಸಲ್ಪಡುವ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ 2025ರ ಅಂತಿಮ ಫಲಿತಾಂಶ ಶುಕ್ರವಾರ (ಮಾರ್ಚ್ 6) ಪ್ರಕಟವಾಗಿದೆ. ಈ ಫಲಿತಾಂಶದಲ್ಲಿ ಕರ್ನಾಟಕದ ಹಲವಾರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ವಿಶೇಷವಾಗಿ ಯಾದಗಿರಿ ಜಿಲ್ಲೆಯ ನಾಲ್ವರು ಪ್ರತಿಭೆಗಳು ಅಖಿಲ ಭಾರತ ಮಟ್ಟದಲ್ಲಿ ರ್ಯಾಂಕ್ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಈ ಬಾರಿ ಯಾದಗಿರಿ ಜಿಲ್ಲೆಯ ಸಂದೀಪ್ ಬಾಡದ್ 82ನೇ ರ್ಯಾಂಕ್, ಡಾ. ನಿವೇದಿತಾ ಸಿ. ಭಾವಿಮನಿ 469ನೇ ರ್ಯಾಂಕ್, ಬಸವರಾಜ ವಿ. ಜವಳಿ 664ನೇ ರ್ಯಾಂಕ್ ಮತ್ತು ಚಂದ್ರಶೇಖರ ಎಂ. ತೆಗ್ಗೆಳ್ಳಿ 880ನೇ ರ್ಯಾಂಕ್ ಗಳಿಸುವ ಮೂಲಕ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಈ ಪ್ರತಿಭೆಗಳು ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪದ ಮೂಲಕ ಸಾಧನೆ ಮಾಡಿ ಯುವಕರಿಗೆ ಪ್ರೇರಣೆಯಾಗಿದ್ದಾರೆ.
ಈ ನಾಲ್ವರು ಅಭ್ಯರ್ಥಿಗಳ ಸಾಧನೆ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ಹೊಸ ಕೀರ್ತಿಯನ್ನು ತಂದಿದ್ದು, ಜಿಲ್ಲೆಯ ಜನರಲ್ಲಿ ಸಂತಸದ ವಾತಾವರಣವನ್ನು ಉಂಟುಮಾಡಿದೆ.
ಸಂದೀಪ್ ಬಾಡದ್ – 82ನೇ ಶ್ರೇಣಿ ಸಾಧನೆ
ಯಾದಗಿರಿ ನಗರದ ಯುವ ಪ್ರತಿಭೆ ಸಂದೀಪ್ ಬಾಡದ್ ಅವರು ಈ ವರ್ಷದ ಯುಪಿಎಸ್ಸಿ ಫಲಿತಾಂಶದಲ್ಲಿ ಅಖಿಲ ಭಾರತ ಮಟ್ಟದಲ್ಲಿ 82ನೇ ರ್ಯಾಂಕ್ ಪಡೆಯುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಂದೀಪ್ ತಮ್ಮ ಪರಿಶ್ರಮದಿಂದ ಈ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ.
ಸಂದೀಪ್ ಅವರ ತಂದೆ ಬಸವರಾಜ ಬಾಡದ್ ಯಾದಗಿರಿ ನಗರದ ಗಾಂಧಿ ಚೌಕ್ ಪ್ರದೇಶದಲ್ಲಿ ಕಿರಾಣಿ ಅಂಗಡಿ ನಡೆಸುವ ವ್ಯಾಪಾರಿಯಾಗಿದ್ದಾರೆ. ಕುಟುಂಬದ ಬೆಂಬಲ ಮತ್ತು ತನ್ನ ದೃಢ ಸಂಕಲ್ಪದಿಂದ ಸಂದೀಪ್ ಈ ಸಾಧನೆ ಮಾಡಲು ಸಾಧ್ಯವಾಯಿತು.
ಅವರು ಪ್ರಾಥಮಿಕ ಶಿಕ್ಷಣವನ್ನು ಯಾದಗಿರಿಯ ಚಿರಂಜೀವಿ ಶಾಲೆ ಹಾಗೂ ನ್ಯೂ ಕನ್ನಡ ಶಾಲೆಯಲ್ಲಿ ಪಡೆದರು. ನಂತರ ಶಹಾಪುರದಲ್ಲಿರುವ ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿದರು.
ಮುಂದೆ ಬೆಂಗಳೂರಿನ ವಿಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಸಂದೀಪ್ ಎರಡು ವರ್ಷಗಳ ಕಾಲ ಉದ್ಯೋಗದಲ್ಲಿದ್ದರು. ಆದರೆ ಬಾಲ್ಯದಿಂದಲೂ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಇದ್ದ ಕಾರಣ ಅವರು ಕೆಲಸ ಬಿಟ್ಟು ಯುಪಿಎಸ್ಸಿ ಪರೀಕ್ಷೆಗೆ ಸಂಪೂರ್ಣವಾಗಿ ತಯಾರಿ ಆರಂಭಿಸಿದರು.
ಈಗಾಗಿ ಅವರು ದೆಹಲಿ ತೆರಳಿ ಯುಪಿಎಸ್ಸಿ ತರಬೇತಿ ಪಡೆದುಕೊಂಡರು. ಕಠಿಣ ಪರಿಶ್ರಮ ಮತ್ತು ನಿಯಮಿತ ಅಧ್ಯಯನದ ಫಲವಾಗಿ ಅವರು ಈ ವರ್ಷ 82ನೇ ರ್ಯಾಂಕ್ ಪಡೆದು ದೇಶದ ಗಮನ ಸೆಳೆದಿದ್ದಾರೆ.
“ನನ್ನ ಯಶಸ್ಸಿಗೆ ನನ್ನ ತಂದೆ-ತಾಯಿ, ಶಿಕ್ಷಕರು ಮತ್ತು ಮಾರ್ಗದರ್ಶಕರ ಪ್ರೋತ್ಸಾಹವೇ ಮುಖ್ಯ ಕಾರಣ. ಅವರ ಬೆಂಬಲ ಇಲ್ಲದೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ,” ಎಂದು ಸಂದೀಪ್ ಬಾಡದ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಡಾ. ನಿವೇದಿತಾ ಭಾವಿಮನಿ – 469ನೇ ಶ್ರೇಣಿ
ಯಾದಗಿರಿ ನಗರದ ನಿವಾಸಿ ಡಾ. ನಿವೇದಿತಾ ಸಿ. ಭಾವಿಮನಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 469ನೇ ರ್ಯಾಂಕ್ ಪಡೆದು ಮತ್ತೊಂದು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಅವರು ಗಿರಿಜಿಲ್ಲೆಯಿಂದ ಹೊರಹೊಮ್ಮಿದ ಪ್ರಪ್ರಥಮ ಐಎಎಸ್ ಅಧಿಕಾರಿಯಾಗುವ ಸಾಧ್ಯತೆ ಹೊಂದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿಸಿದೆ.
ಅವರ ತಂದೆ ಚಂದಪ್ಪ ಭಾವಿಮನಿ ಆರೋಗ್ಯ ಇಲಾಖೆಯ ನಿವೃತ್ತ ನೌಕರರಾಗಿದ್ದು, ತಾಯಿ ವಿಜಯಲಕ್ಷ್ಮೀ ವರ್ಕನಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂವರು ಮಕ್ಕಳಲ್ಲಿ ನಿವೇದಿತಾ ಎರಡನೇ ಪುತ್ರಿಯಾಗಿದ್ದಾರೆ.
ನಿವೇದಿತಾ ಅವರು ಯಾದಗಿರಿಯ ಆರ್ವಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ವರೆಗೆ ಓದಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ನಂತರ ಕಲಬುರಗಿಯ ಎಸ್ಬಿಆರ್ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು.
ಮುಂದೆ ಬೆಂಗಳೂರಿನ ಕಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಸೀಟ್ ಪಡೆದು ಎಂ.ಬಿ.ಬಿ.ಎಸ್ ಪದವಿ ಪಡೆದರು. ವೈದ್ಯೆಯಾಗಿದ್ದರೂ ಸಮಾಜಕ್ಕೆ ಹೆಚ್ಚಿನ ಸೇವೆ ಮಾಡಬೇಕೆಂಬ ಉದ್ದೇಶದಿಂದ ಅವರು ಐಎಎಸ್ ಅಧಿಕಾರಿಯಾಗುವ ಕನಸು ಕಂಡರು.
ಈ ಗುರಿಗಾಗಿ ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗದಿದ್ದರೂ ಅವರು ಹಿಂಜರಿಯದೇ ಮತ್ತೊಮ್ಮೆ ಕಠಿಣ ಪರಿಶ್ರಮ ನಡೆಸಿದರು.
ಕೊನೆಗೆ ಎರಡನೇ ಪ್ರಯತ್ನದಲ್ಲೇ 469ನೇ ರ್ಯಾಂಕ್ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಅವರ ಈ ಸಾಧನೆ ಯಾದಗಿರಿಯ ಅನೇಕ ಯುವತಿಯರಿಗೆ ಪ್ರೇರಣೆಯಾಗಿದೆ.
ಬಸವರಾಜ ಜವಳಿ – 664ನೇ ಶ್ರೇಣಿ
ಶಹಾಪುರ ನಗರದ ನಿವಾಸಿ ಬಸವರಾಜ ವಿ. ಜವಳಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 664ನೇ ರ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಮೂರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ ಬಸವರಾಜ ಅವರ ಕಥೆ ಅನೇಕ ಯುವಕರಿಗೆ ಪ್ರೇರಣೆಯಾಗಿದೆ.
ಅವರ ತಂದೆ ವಿಶ್ವನಾಥ ಜವಳಿ ಸಣ್ಣ ವ್ಯಾಪಾರಿಯಾಗಿದ್ದು, ತಾಯಿ ಗಿರೀಜಾ ಜವಳಿ ಗೃಹಿಣಿಯಾಗಿದ್ದಾರೆ. ಸರಳ ಕುಟುಂಬದಿಂದ ಬಂದ ಬಸವರಾಜ ತಮ್ಮ ಪರಿಶ್ರಮದಿಂದ ಉನ್ನತ ಸ್ಥಾನ ಗಳಿಸಿದ್ದಾರೆ.
ಅವರು ಶಹಾಪುರದಲ್ಲಿಯೇ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಯಾದಗಿರಿಯ ಆರ್ವಿ ಶಾಲೆಯಲ್ಲಿ ಹೈಸ್ಕೂಲ್ ಓದಿದರು.
ಮುಂದೆ ಕಲಬುರಗಿಯ ಮಹೇಶ್ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿ ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು.
ಐಎಎಸ್ ಅಧಿಕಾರಿಯಾಗಬೇಕೆಂಬ ಗುರಿಯೊಂದಿಗೆ ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ತರಬೇತಿ ಪಡೆಯಲು ದೆಹಲಿ ತೆರಳಿದರೂ ಕೋವಿಡ್ ಕಾರಣದಿಂದ ತರಗತಿಗಳು ನಿಂತುಹೋಗಿದ್ದವು.
ಆದರೂ ಅವರು ನಿರಾಶರಾಗದೆ ಬೆಂಗಳೂರಿನಲ್ಲಿ ಸ್ವತಃ ತಯಾರಿ ಮುಂದುವರೆಸಿದರು. ಪ್ರತಿದಿನ 12 ರಿಂದ 14 ಗಂಟೆಗಳ ಕಾಲ ಓದಿ ಕಠಿಣ ಪರಿಶ್ರಮ ಮಾಡಿದ ಪರಿಣಾಮ ಮೂರನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಚಂದ್ರಶೇಖರ ತೆಗ್ಗೆಳ್ಳಿ – 880ನೇ ಶ್ರೇಣಿ
ಶಹಾಪುರ ತಾಲೂಕಿನ ಚೆನ್ನೂರ (ಕೆ) ಗ್ರಾಮದ ಚಂದ್ರಶೇಖರ ಎಂ. ತೆಗ್ಗೆಳ್ಳಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 880ನೇ ರ್ಯಾಂಕ್ ಪಡೆದು ಮತ್ತೊಂದು ಸಾಧನೆ ಮಾಡಿದ್ದಾರೆ.
ಗ್ರಾಮೀಣ ಹಿನ್ನೆಲೆಯಲ್ಲೇ ಬೆಳೆದ ಚಂದ್ರಶೇಖರ ತಮ್ಮ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಅವರು ಚೆನ್ನೂರದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದು ನಂತರ ವನದುರ್ಗದಲ್ಲಿ ಹೈಸ್ಕೂಲ್ ಓದಿದರು.
ಮುಂದೆ ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು. ಬಳಿಕ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು.
ಅವರು ಹಲವು ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಿದ್ದು ಆರನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
“ನನಗೆ ಗುರಿ ಸ್ಪಷ್ಟವಾಗಿತ್ತು. ಅದಕ್ಕಾಗಿ ನಿರಂತರವಾಗಿ ಪರಿಶ್ರಮಪಟ್ಟೆ. ನನ್ನ ತಂದೆ-ತಾಯಿ ಹಾಗೂ ಕುಟುಂಬದ ಬೆಂಬಲವೇ ನನಗೆ ದೊಡ್ಡ ಬಲ,” ಎಂದು ಚಂದ್ರಶೇಖರ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸಂಭ್ರಮದ ವಾತಾವರಣ
ಯುಪಿಎಸ್ಸಿ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆಯ ನಾಲ್ವರು ಪ್ರತಿಭೆಗಳು ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂತಸದ ವಾತಾವರಣ ನಿರ್ಮಾಣವಾಗಿದೆ. ಕುಟುಂಬಸ್ಥರು, ಸ್ನೇಹಿತರು ಮತ್ತು ಸ್ಥಳೀಯರು ಅವರಿಗೆ ಅಭಿನಂದನೆ ಸಲ್ಲಿಸಿ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ.
ಗ್ರಾಮೀಣ ಹಿನ್ನೆಲೆಯಿಂದ ಬಂದ ಈ ಯುವಕರು ದೇಶದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರುವುದು ಜಿಲ್ಲೆಯ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಿದೆ.
ಯಾದಗಿರಿ ಜಿಲ್ಲೆಯ ಈ ಸಾಧನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಸರ್ಕಾರಿ ಹುದ್ದೆಗಳತ್ತ ಸಾಗಲು ಪ್ರೇರಣೆ ನೀಡಲಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.